ಗ್ರ್ಯಾಟನ್, ಹೆನ್ರಿ

	1746 - 1820. ಐರ್ಲೆಂಡಿನ ಒಬ್ಬ ವಾಗ್ಮಿ. ರಾಜಕಾರಣಿ, ತನ್ನ ನಾಡಿನ ಸ್ವಾತಂತ್ರ್ಯಕ್ಕಾಗಿ ಹೋರಾಡಿದವ. 1746ರ ಜುಲೈ 3ರಂದು ಡಬ್ಲಿನ್ ನಗರದಲ್ಲಿ ಜನಿಸಿದ. ಅಲ್ಲಿಯ ಟ್ರಿಸಿಟಿ ಕಾಲೇಜಿನಲ್ಲಿ ಶಿಕ್ಷಣ ಪಡೆದ. ಈತನಿಗೆ ಪ್ರಾಚೀನ ಗ್ರೀಕ್ ಮತ್ತು ಲ್ಯಾಟಿನ್ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ ಬೆಳೆಯಿತು. ವಿದ್ಯಾರ್ಥಿಯಾಗಿದ್ದಾಗ ಉನ್ನತ ವಾಗ್ಮಿಗಳಿಂದ ಸ್ಫೂರ್ತಿ ಹೊಂದಿದ. ಈತ ವಕೀಲನಾಗಿ ಜೀವನದಲ್ಲಿ ತೊಡಗಿದನಾದರೂ ಇವನಿಗೆ ಆ ವೃತ್ತಿಯಲ್ಲಿ ಹೆಚ್ಚು ಆಸಕ್ತಿ ಇರಲಿಲ್ಲ. ಇವನು ರಾಜಕೀಯವನ್ನು ಪ್ರವೇಶಿಸಿದ. ಐರಿಷ್ ಪಾರ್ಲಿಮೆಂಟಿನ ಸದಸ್ಯನಾಗಿ ಐರ್ಲೆಂಡಿನ ಸ್ವಾತಂತ್ರ್ಯ ಚಳವಳಿಯಲ್ಲಿ ಮಗ್ನನಾದ. ಐರಿಷ್ ಪಾರ್ಲಿಮೆಂಟನ್ನು ಇಂಗ್ಲಿಷ್ ಪಾರ್ಲಿಮೆಂಟಿನ ಅಧೀನತೆಯಿಂದ ತಪ್ಪಿಸುವುದು ಇವನ ಮುಖ್ಯ ಗುರಿಯಾಗಿತ್ತು.

	ಅಮೆರಿಕನ್ ಕ್ರಾಂತಿಯಿಂದ ಗ್ರ್ಯಾಟನ್ ಸ್ಫೂರ್ತಿ ಪಡೆದ. ಐರಿಷ್ ಪಾರ್ಲಿಮೆಂಟು ಅನುಮೋದಿಸಿದ ವಿಧೇಯಕಗಳಿಗೆಲ್ಲ ಇಂಗ್ಲಿಷ್ ಪಾರ್ಲಿಮೆಂಟಿನ ಒಪ್ಪಿಗೆ ಅಗತ್ಯವೆಂಬ ಪಾಯ್ನಿಂಗ್ಸ್ ಅಧಿನಿಮಯಮವನ್ನು ರದ್ದು ಮಾಡಲು 1780ರಲ್ಲಿ ಚಳವಳಿ ಹೂಡಿದ. ಐರಿಷ್ ಕ್ಯಾಥೊಲಿಕರ ವಿರುದ್ಧ ಜಾರಿಯಲ್ಲಿದ್ದ ಅಧಿನಿಯಮಗಳನ್ನು ಸಡಿಲಗೊಳಿಸಬೇಕೆಂದು ಈತ ವಾದಿಸಿದ.

	ಆಗ ಇಂಗ್ಲೆಂಡ್ ಮತ್ತು ಫ್ರಾನ್ಸ್ ಪರಸ್ಪರವಾಗಿ ಯುದ್ಧದಲ್ಲಿ ತೊಡಗಿದ್ದವು. ಆಗ ನಡೆಯುತ್ತಿದ್ದ ಅಮೆರಿಕನ್ ಸ್ವಾತಂತ್ರ್ಯ ಯುದ್ಧದಲ್ಲಿ ಫ್ರೆಂಚರು ಅಮೆರಿಕನರಿಗೆ ಬೆಂಬಲ ನೀಡಿದ್ದರು. ಫ್ರೆಂಚರು ಐರ್ಲೆಂಡಿನ ಮೇಲೆ ದಂಡಯಾತ್ರೆ ಕೈಗೊಳ್ಳುವ ಸಾಧ್ಯತೆ ಇದ್ದುದರಿಂದ ಅದನ್ನು ತಡೆಗಟ್ಟಲು ಐರ್ಲೆಂಡಿನಲ್ಲಿ ಸ್ವಯಂಸೇವಕ ದಳ ಅಸ್ತಿತ್ವಕ್ಕೆ ಬಂದಿತು. ಆದರೆ ಐರ್ಲೆಂಡಿನ ಸ್ವಾತಂತ್ರ್ಯವಾದಿಗಳಾಗಿದ್ದ ಕ್ಯಾಥೊಲಿಕರು ಶಸ್ತ್ರಗಳನ್ನು ಹೊಂದಿರುವಂತಿರಲಿಲ್ಲ. 1782ರಲ್ಲಿ ಐರ್ಲೆಂಡಿನ ಆಲ್ಸ್‍ಟರ್ ಸ್ವಯಂಸೇವಕರು ಐರ್ಲೆಂಡಿನ ಸ್ವಾತಂತ್ರ್ಯ ಮತ್ತು ದಂಡನೆಯ ಕಾನೂನುಗಳ ರದ್ದನ್ನು ಕೋರಿ ನಿರ್ಣಯಗಳನ್ನು ಮಾಡಿದರು. ಏಪ್ರಿಲ್ 1782ರಲ್ಲಿ ಗ್ರ್ಯಾಟನ್ ಐರ್ಲೆಂಡಿನ ಪಾರ್ಲಿಮೆಂಟಿನಲ್ಲಿ ಮಂಡಿಸಿದ ಹಕ್ಕುಗಳ ಘೋಷಣೆಯ ವಿಧೇಯಕ ಒಮ್ಮತದಿಂದ ಅಂಗೀಕೃತವಾಯಿತು. ಅನಂತರ ಇಂಗ್ಲಿಷ್ ಪಾರ್ಲಿಮೆಂಟು ಪಾಯ್ನಿಂಗ್ಸ್ ಅಧಿನಿಯಮವನ್ನು ರದ್ದು ಮಾಡಿ, ಐರ್ಲೆಂಡಿನ ಪಾರ್ಲಿಮೆಂಟಿಗೆ ಅಧಿನಿಯಮ ರಚಿಸುವ ಹಕ್ಕನ್ನು ನೀಡಿತು.

	ಆದರೂ ಐರ್ಲೆಂಡಿನ ಕಾರ್ಯಾಂಗ ಇಂಗ್ಲಿಷ್ ಸರ್ಕಾರದ ಹತೋಟಿಯಲ್ಲಿತ್ತು. 1799ರಲ್ಲಿ ಗ್ರ್ಯಾಟನ್ ಇದನ್ನೂ ವಿರೋಧಿಸಿದ. ಐರ್ಲೆಂಡಿನಲ್ಲಿ ಕ್ಯಾಥೊಲಿಕರು ಹೆಚ್ಚು ಸಂಖ್ಯೆಯಲ್ಲಿದ್ದರೂ ಅವರಿಗೆ ಮತ ನೀಡುವ ಹಕ್ಕಿರಲಿಲ್ಲ. ಗ್ರ್ಯಾಡನ್ ಇದಕ್ಕಾಗಿ ಹೋರಟ ನಡೆಸಿದ. 1792ರಲ್ಲಿ ಕ್ಯಾಥೊಲಿಕರ ಪರಿಹಾರ ಮಸೂದೆಗೆ ಐರಿಷ್ ಪಾರ್ಲಿಮೆಂಟಿನಲ್ಲಿ ಬೆಂಬಲ ನೀಡಿದನಾದರೂ ಅದು ಯಶಸ್ವಿಯಾಗಲಿಲ್ಲ. ಆಮೇಲೆ ಬಹು ಕಾಲ ಐರ್ಲೆಂಡಿನ ಮೇಲೆ ದಬ್ಬಾಳಿಕೆ ನಡೆಯಿತು. ಗ್ರ್ಯಾಟನ್ ಅನಾರೋಗ್ಯದ ನಿಮಿತ್ತ ಹಲವು ವರ್ಷಗಳ ಕಾಲ ರಾಜಕೀಯದಿಂದ ದೂರವಾಗಿದ್ದ. ಆದರೆ 1797ರಲ್ಲಿ ಪಾರ್ಲಿಮೆಂಟಿನಿಂದ ನಿವೃತ್ತನಾದ ಅವನು ಇಂಗ್ಲೆಂಡಿಗೆ ಹೋದ.

	1798ರಲ್ಲಿ ಐರ್ಲೆಂಡಿನಲ್ಲಿ ಸಂಭವಿಸಿದ ದಂಗೆಯನ್ನು ಇಂಗ್ಲಿಷರು ಅಡಗಿಸಿದರು. ಐರ್ಲೆಂಡ್ ಮತ್ತು ಇಂಗ್ಲೆಂಡ್ ಪಾರ್ಲಿಮೆಂಟುಗಳನ್ನು ಒಟ್ಟುಗೂಡಿಸಲು ಬ್ರಿಟಿಷ್ ಪ್ರಧಾನಿ ವಿಲಿಯಮ್ ಪಿಟ್ ಯೋಜನೆಯೊಂದನ್ನು ರೂಪಿಸಿದ. ಗ್ರ್ಯಾಟನ್ ಇದಕ್ಕೆ ವಿರೋಧ ವ್ಯಕ್ತಪಡಿಸಿದ. ಈತನನ್ನು ಐರಿಷ್ ಪ್ರಿವಿ ಕೌನ್ಸಿಲ್ ಮತ್ತು ಡಬ್ಲಿನ್ ವ್ಯಾಪಾರಿಗಳ ಶ್ರೇಣಿ ಹೊರಹಾಕಿದವು. ಐರಿಷ್ ಪಾರ್ಲಿಮೆಂಟಿನ ಸದಸ್ಯರಿಗೆ ಲಂಚ ಕೊಟ್ಟು ಅವರನ್ನು ಕೊಳ್ಳಲು ಪಿಟ್ ಮಾಡಿದ ಪ್ರಯತ್ನವನ್ನು ಗ್ರ್ಯಾಟನ್ ತೀವ್ರವಾಗಿ ವಿರೋಧಿಸಿದ. ಪಾರ್ಲಿಮೆಂಟಿಗೆ ಆಯ್ಕೆಯಾಗಿ ಅಲ್ಲಿಂದ ತನ್ನ ಪ್ರತಿಭಟನೆಯನ್ನು ವ್ಯಕ್ತಪಡಿಸಿದ. ಆಗ ಅವನು ಮಾಡಿದ ಭಾಷಣ ಪ್ರಸಿದ್ಧವಾಗಿದೆ. 1801ರಲ್ಲಿ ಒಕ್ಕೂಟ ಆಯಿತು. ಸ್ವಲ್ಪ ಕಾಲ ಗ್ರ್ಯಾಟನ್ ಪಾರ್ಲಿಮೆಂಟಿನ ಹೊರಗಿದ್ದ. 1805ರಲ್ಲಿ ಮತ್ತೆ ಪಾರ್ಲಿಮೆಂಟ್ ಪ್ರವೇಶಿಸಿದ. ಆಳುವ ಪಕ್ಷದವರು ಇವನನ್ನು ತಮ್ಮ ಕಡೆಗೆ ಒಲಿಸಿಕೊಳ್ಳಲು ಯತ್ನಿಸಿದರು. ಆದರೆ ಗ್ರ್ಯಾಟನ್ ಅವರ ಬಲೆಗೆ ಬೀಳಲಿಲ್ಲ. ಅವನಿಗಿಂತ ತೀವ್ರವಾದಿಗಳಾದ ಯುವಕರ ಚಳವಳಿಯೊಂದು ಪ್ರಬಲವಾಯಿತು. ಕ್ಯಾಥೊಲಿಕರ ಕಷ್ಟ ಪರಿಹಾರಕ್ಕೆ 1813ರಲ್ಲಿ ಈತ ತಂದ ವಿಧೇಯಕವೊಂದು ಸ್ವಲ್ಪದರಲ್ಲಿ ಕಾಮನ್ಸ್ ಸಭೆಯಲ್ಲಿ ಪರಾಜಯ ಹೊಂದಿತ್ತು. ಅವರ ಹಕ್ಕುಗಳನ್ನು ಕುರಿತ ಚರ್ಚೆಯಲ್ಲಿ ಭಾಗವಹಿಸಲು ಇವನು ಅನಾರೋಗ್ಯವನ್ನೂ ಲೆಕ್ಕಿಸದೆ ಲಂಡನಿಗೆ ಪ್ರಯಾಣ ಮಾಡಿದ. ಆದರೆ ತನ್ನ ಉದ್ದೇಶವನ್ನು ಪೂರೈಸಲಾಗದೆಯೆ 1820ರ ಜೂನ್ 6ರಂದು ಲಂಡನಿನಲ್ಲಿ ತೀರಿಕೊಂಡ.

	ಅದ್ಭುತವಾದ ವಾಗ್ಮಿತೆ, ರಾಷ್ಟ್ರನಿಷ್ಠೆ, ಸೇವಾಮನೋಭವ, ಪ್ರಾಮಾಣಿಕತೆ ಇವು ಗ್ರ್ಯಾಟನನ ಗುಣಗಳು. ಆದರೆ ಜಟಿಲ ಪ್ರಶ್ನೆಗಳನ್ನು ಪರಿಹರಿಸುವ ಸಾಮಥ್ರ್ಯ ಅವನಿಗೆ ಇರಲಿಲ್ಲ. ತೀವ್ರವಾಗಿ ಬದಲಾಗುತ್ತಿದ್ದ ಪರಿಸ್ಥಿತಿಗಳನ್ನು ಅರಿತು ಅವಕ್ಕೆ ತಕ್ಕಂತೆ ನಡೆಯುವ ಚಾಕಚಕ್ಯ ಆತನಿಗಿರಲಿಲ್ಲ.									(ಎ.ವಿ.ವಿ.)
(ಪಿ.ಆರ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ